ಬೆಳಗುತ್ತಿಯ ಅರಸರು - 
14-16ನೆಯ ಶತಮಾನಗಳಲ್ಲಿ ಕರ್ನಾಟಕದ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿಯಿಂದ ವಿಜಯನಗರ ಸಾಮ್ರಾಜ್ಯದ ಅರಸರ ಮಾರ್ಗದರ್ಶನದಲ್ಲಿ ಸ್ವತಂತ್ರವಾಗಿ ಆಳಿದ ಒಂದು ಅರಸು ಮನೆತನ. ಹಲವು ಕೈಫಿಯತ್ತುಗಳು ಈ ವಂಶದ ಅರಸರ ಬಗ್ಗೆ ಬೆಳಕು ಚೆಲ್ಲುತ್ತವೆ. 

	ಬೆಳಗುತ್ತಿ ಅರಸರ ರಾಜಕೀಯ ಇತಿಹಾಸ ಚೆಲುವ ರಂಗಪ್ಪನಾಯಕನಿಂದ (1361-81) ಆರಂಭವಾಗುತ್ತದೆ. ಕುದಿರೆ ರಾಯರ ವೃತ್ತಾಂತದ ಪ್ರಕಾರ ಈತ ವಿಜಯನಗರದ ಅರಸು ಸಂತತಿಗೆ ಸೇರಿದವನೆಂದು ತಿಳಿಯುತ್ತದೆ. ಬೇಡರ ಚನ್ನನಾಯಕ ಒಂದನೆಯ ಬುಕ್ಕರಾಯನ ಕಾಲದಲ್ಲಿ ಬೆಳಗುತ್ತಿ ಮತ್ತು ಸುತ್ತಮುತ್ತಲ ಮಲೆನಾಡು ಪ್ರಾಂತ್ಯಗಳಲ್ಲಿ ಕೋಟೆ ಕಟ್ಟಿಕೊಂಡು ಆಳುತ್ತಿದ್ದ. ಚೆಲುವ ರಂಗಪ್ಪ ನಾಯಕ ಬುಕ್ಕನ ಅನುಮತಿ ಪಡೆದು ಸೈನ್ಯದೊಂದಿಗೆ ಬಂದು ಈತನನ್ನು ಸೋಲಿಸಿ ಕೋಟೆಯನ್ನೂ ಬಿರುದುಗಳನ್ನೂ ಕಿತ್ತುಕೊಂಡ. ಅನಂತರ ಆ ಪ್ರದೇಶವನ್ನು ಆಳಲು ಚೆಲುವ ರಂಗಪ್ಪನಿಗೇ ಬಿಟ್ಟುಕೊಡಲಾಯಿತು. ಭಾನುವಳ್ಳಿಯಲ್ಲಿದ್ದುಕೊಂಡು ರಂಗಪ್ಪನಾಯಕ ಆ ಪ್ರದೇಶದ ಪುರೋಭಿವೃದ್ಧಿಗೆ ಕಾರಣನಾದ. ಕ್ರಮೇಣ ಬೆಳಗುತ್ತಿಯನ್ನು ಪ್ರಮುಖ ಕೇಂದ್ರವಾಗಿ ಮಾಡಿದ. ಈತ ಹರಿಹರದ ಹರಿಹರೇಶ್ವರ ದೇವಸ್ಥಾನ ದುರಸ್ತಿಮಾಡಿದ್ದಲ್ಲದೆ ತುಂಗಭದ್ರಾ ದಂಡೆಯಲ್ಲಿರುವ ರಾಮೇಶ್ವರ ದೇವಸ್ಥಾನದ ದಕ್ಷಿಣಕ್ಕೆ ದಿಡಗೂರು ಎಂಬ ಪಟ್ಟಣ ನಿರ್ಮಿಸಿದ ಕೂಡ (ಈಗ ಇದು ಸಣ್ಣ ಗ್ರಾಮ. ಹೊನ್ನಾಳಿ ತಾಲ್ಲೂಕಿನಲ್ಲಿದೆ). ಬೆಳಗುತ್ತಿ ಕೋಟೆಯನ್ನು ವಿಸ್ತರಿಸಿದ. ಉಡುಗಣಿ, ಕವಲೆದುರ್ಗ, ಹೊನ್ನಾಳಿ ಮುಂತಾದ ಕಡೆಗಳಲ್ಲಿ ಹೊಸದಾಗಿ ಕೋಟೆಗಳನ್ನು ಕಟ್ಟಿಸಿದ. ತೀರ್ಥಗಿರಿಯಲ್ಲಿಯ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ. ಭೂಕಂದಾಯ ನಿಗದಿಗೊಳಿಸಿದ. ಈ ಪದ್ಧತಿ ರಾಯರೇಖೆ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು. ಈತನ ಅನಂತರ ಆಳ್ವಿಕೆಗೆ ಬಂದವರು: ಭೂಪಾಲರಾಯ (ಭೂಪರಾಯ) (1382-1415), ಶೂರಭೂಪ (?), ದೇವರಾಯ (1416-30), ಅಭ್ರಮಾಧವ, (1431-59), ವೆಂಕಟಾದ್ರಿ (2460-87), ರಾಮಕೋಟಿ (1488-90), ಯಲ್ಲಣ್ಣ (?) ಮತ್ತು ದಾಸಪ್ಪ (1491-1571). 

	ಸ್ಥಳೀಯ ಚಾರಿತ್ರಿಕ ದಾಖಲೆಗಳ ಪ್ರಕಾರ ರಾಮಕೋಟಿರಾಯನ ಕಾಲದಲ್ಲಿ ವಿಜಯನಗರದ ಪ್ರೌಢಸಿಂಗ ರಾಯ (ಸಾಳುವ ನರಸಿಂಗ ಆಥವಾ ಅವನ ಮಗ ಇಮ್ಮಡಿ ನರಸಿಂಹನಿರಬೇಕೆಂಬ ಅಭಿಪ್ರಾಯವಿದೆ) ತನ್ನ ಸಂಬಂಧಿಗಳು ಬೆಳಗುತ್ತಿಯನ್ನು ಪ್ರತ್ಯೇಕವಾಗಿ ಆಳುತ್ತಿದ್ದುದನ್ನು ಸಹಿಸದೆ ಹೊನ್ನಾಳಿಯನ್ನು ಮುತ್ತಿಗೆ ಹಾಕಿ ವಶಪಡಿಸಿ ಕೊಂಡು ಅನಂತರ ಬಿಟ್ಟುಕೊಟ್ಟ. ಅಳಿಯ ರಾಮರಾಯನ ಅನಂತರ ವಿಜಯನಗರದ ಸಿಂಹಾಸನ ಏರಿದ ತಿರುಮಲದೇವರಾಯನನ್ನು ಸುಲ್ತಾನರು ಸೋಲಿಸಿದಾಗ ವಿಜಯನಗರಕ್ಕೆ ದಕ್ಷ ಉತ್ತರಾಧಿಕಾರಿಯೊಬ್ಬನ ಅಗತ್ಯವಿತ್ತು. ಈ ಸಂದರ್ಭದಲ್ಲಿ ಬೆಳಗುತ್ತಿಯ ಅರಸ ದಾಸಪ್ಪ ತನ್ನ ಎರಡನೆಯ ಮಗ ವೀರವೆಂಕಟನನ್ನು ಅಲ್ಲಿಗೆ ರಾಜನಾಗಿ ನೇಮಕ ಮಾಡಲು ಒಪ್ಪುವುದರ ಮೂಲಕ ಮತ್ತೆ ವಿಜಯನಗರದ ಸಂಬಂಧ ಬೆಳೆಸಿಕೊಂಡ. 

	ದಾಸಪ್ಪ (1491-1571) ದಕ್ಷನೂ ಉದಾತ್ತ ಗುಣಯುತನೂ ಆಗಿದ್ದನೆಂದು ತೆಲುಗು ಪದ್ಯವೊಂದರಿಂದ ತಿಳಿಯುತ್ತದೆ. ಈತನ ಮೊಮ್ಮಗನೇ ಕೆಳದಿ ರಾಜ್ಯಸ್ಥಾಪಕ ಸದಾಶಿವನಾಯಕ.

	ಮುಂದೆ ಪುಣೆಯ ಪೇಶ್ವೆ ಮಾಧನರಾಯನ ಮಗ ನಾನಾರಾಯ ಬೆಳಗುತ್ತಿಯನ್ನು ವಶಪಡಿಸಿ ಕೊಂಡಿದ್ದಾಗಲೂ ಹೈದರ್, ಟಿಪ್ಪು ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲೂ ಅನಂತರ ಬ್ರಿಟಿಷರ ಕಾಲದಲ್ಲೂ ಬೆಳಗುತ್ತಿಯ ಅರಸು ಸಂತತಿಯವರು ಅವರಿಂದ ಪರಿಹಾರ ಧನ ಪಡೆಯುತ್ತಿದ್ದರು. ಬೆಳಗುತ್ತಿ ಅರಸರು ಕೊಡಿಯಾಲಬೈಲಿನ ಯುದ್ಧದಲ್ಲಿ ಹೈದರನಿಗೆ ಸಹಾಯ ಮಾಡಿ ಬಸವರಾಜ ದುರ್ಗವನ್ನು ವಶಪಡಿಸಿಕೊಳ್ಳಲು ಸಹಾಯ ನೀಡಿದುದರ ಜೊತೆಗೆ 1778ರಲ್ಲಿ ಚಿತ್ರದುರ್ಗದ ಮುತ್ತಿಗೆಯಲ್ಲಿಯೂ ಕೊಡಗಿನ ಆಕ್ರಮಣದಲ್ಲಿಯೂ ನೆರವಾದರು ಇತ್ಯಾದಿಯಾಗಿ ಹೈದರನ ಕಾಲದಲ್ಲಿ ನಡೆದ ಘಟನೆಗಳನ್ನು ಕೈಫಿಯತ್ತಿನಲ್ಲಿ ಉಲ್ಲೇಖಿಸಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ